ಮಕ್ಕಳ ಕಥೆ: ಪರರ ಸ್ವತ್ತು ಪಾಷಾಣಕ್ಕೆ ಸಮ
ಒಮ್ಮೆ ಚಂದ್ರಗುಪ್ತ ಮೌರ್ಯನು ತನ್ನ ಮೇಧಾವಿ ಮಂತ್ರಿ ಚಾಣಕ್ಯನೊಂದಿಗೆ ರಾಜ್ಯದಲ್ಲಿ ಸಂಚಾರ ಗೈಯುತ್ತಾನೆ. ಅದು ತುಂಬಾ ಮೈಕೊರೆವ ಚಳಿಗಾಲವಾದ್ದರಿಂದ, ಬಡ ಜನರ ಕಷ್ಟ ಸುಖ ಅರಿಯಲೆಂದು ಮಾರುವೇಶದಲ್ಲಿ ಇರುತ್ತಾರೆ. ಬಹುತೇಕರು ರಾತ್ರಿ ಸರಿಯಾಗಿ ಹೊದ್ದುಕೊಳ್ಳಲು ಇಲ್ಲದೆ, ಕೊರೆವ ಚಳಿಯಲ್ಲಿ ನಡುಗುತ್ತಿರುತ್ತಾರೆ. ಇದನ್ನು ಕಂಡ ರಾಜ ನೊಂದುಕೊಳ್ಳುತ್ತಾರೆ. 'ಇಂಥ ಚಳಿಯಲ್ಲಿ ಸರಿಯಾಗಿ ಹೊದ್ದುಕೊಳ್ಳಲು ಇರದೆ ಪರಿತಪಿಸುವ ಈ ಜನಕ್ಕೆ ಹೊದ್ದುಕೊಳ್ಳಲು ನಾಳೆ ಕಂಬಳಿ ವ್ಯವಸ್ಥೆ ಮಾಡಬೇಕು' ಎಂದು ರಾಜನು ಚಾಣಕ್ಯನಿಗೆ ಆಜ್ಞಾಪಿಸುತ್ತಾನೆ.
ಜನರಿಗೆ ಹಂಚಲೆಂದು ಆ ದಿನ ರಾತ್ರಿ ಕಂಬಳಿಗಳನ್ನು ಚಾಣಕ್ಯನ ನೂರಾರು ಮನೆಯಲ್ಲಿ ಸಂಗ್ರಹಿಸಿಡುತ್ತಾರೆ. ಇದನ್ನು ಹೇಗೋ ಅರಿತುಕೊಂಡ ಕಳ್ಳರು, ಕಂಬಳಿಗಳನ್ನು ದೋಚಲು ಚಾಣಕ್ಯನ ಮನೆಗೆ ಬರುತ್ತಾರೆ. ಅಲ್ಲಿ ಒಂದು ಚಾಪೆಯ ಮೇಲೆ ಚಾಣಕ್ಯನು ಹರುಕಲಾದ ಕಂಬಳಿ ಹೊದ್ದು ಕುಳಿತಿರುವುದನ್ನು ಕಂಡು ಗಾಬರಿಯಾದ ಕಳ್ಳರು ನಿಮ್ಮಲ್ಲಿ ಇಷ್ಟೊಂದು ಕಂಬಳಿ ಇದ್ದರೂ, ಹರುಕಲಾದ ಹಳೆ ಕಂಬಳಿ ಏಕೆ ಹೊದ್ದಿರುವಿರಿ?' ಎನ್ನುತ್ತಾರೆ. ಆಗ ಚಾಣಕ್ಯನು 'ಇಲ್ಲಿ ಸಂಗ್ರಹಿಸಿಟ್ಟ ಕಂಬಳಿಗಳು ಕಡುಬಡವರಿಗಾಗಿವೆ. ನನಗೆ ಹೊದ್ದುಕೊಳ್ಳಲು ಹರಕಲು ಕಂಬಳಿಯಾದರೂ ಇದೆ. ಅವರಿಗೆ ಇಂಥದ್ದೂ ಇಲ್ಲ. ಅಷ್ಟಕ್ಕೂ ಮಹಾರಾಜರು ನನ್ನನ್ನು ಪ್ರಾಮಾಣಿಕ ವ್ಯಕ್ತಿ ಎಂದು ಈ ಕಂಬಳಿಗಳನ್ನು ನನ್ನ ಮನೆಯಲ್ಲಿ ಇಟ್ಟಿದ್ದಾರೆ. ಇದರಲ್ಲಿ ಒಂದನ್ನು ತೆಗೆದುಕೊಂಡರೆ ನಾನು ರಾಜರಿಗೆ ಪ್ರಾಮಾಣಿಕನಾಗಿರಲು ಸಾಧ್ಯವೇ..?' ಎನ್ನುತ್ತಾನೆ.
ಈ ಮಾತು ಕೇಳುತ್ತಲೆ ಕಳ್ಳರು, ನಾಚಿಕೆಯಿಂದ ತಲೆ ತಗ್ಗಿಸುತ್ತಾರೆ. ಪ್ರಾಮಾಣಿಕತೆ ಹಾಗೂ ನಂಬಿಗಸ್ಥರಾಗಲು ಮನಸ್ಸು ಮಾಡುತ್ತಾರೆ. ಇಲ್ಲಿಯವರೆಗೆ ನಾವು ಪರರಿಂದ ಕಳುವು ಮಾಡಿ ವೃದ್ಧಿಸಿಕೊಂಡ ಸಂಪತ್ತು ಪಾಪದ ಮೂಟೆ ಎಂದು ಅರ್ಥೈಸಿಕೊಳ್ಳುತ್ತಾರೆ. ಪ್ರಾಮಾಣಿಕತೆ ಎಂಬುದು ಗೌರವಯುತ ಜೀವನ ನಡೆಸಲು ಸಹಕಾರಿ ಎಂದರಿತರು, ತಾವು ಕಳ್ಳತನ ಮಾಡಲು ಬಂದುದಕ್ಕಾಗಿ ಚಾಣಕ್ಯರಲ್ಲಿ ಕ್ಷಮೆಯಾಚಿಸಿ ಹೊರ ನಡೆಯುತ್ತಾರೆ.
ಈ ಕಥೆಯ ನೀತಿ ಇಷ್ಟೇ, ಪರರ ವಸ್ತುಗಳು ಪಾಷಾಣಕ್ಕೆ ಸಮವೆಂದು ಪ್ರತಿಯೊಬ್ಬರೂ ತಿಳಿಯಬೇಕು. ಹಾಗೂ ಅನ್ಯರ ವಸ್ತುಗಳಿಗಾಗಿ ಆಸೆ ಪಡದೇ ನಮ್ಮಿಂದ ಸಾಧ್ಯವಾದಷ್ಟು ಪರರಿಗೆ ಉಪಕಾರವಾಗುವಂತಹ ಕೆಲಸಗಳನ್ನು ಮಾಡುತ್ತಾ ಸಾಗಬೇಕು. ನೀವೇನಂತೀರಿ??
ಕಥಾ ಕೃಪೆ: ಚಾಣಕ್ಯ ನೀತಿಸಾರ
No comments:
Post a Comment